ಮಹಾದೇವ 1 - 
		
12ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ವಾರಂಗಲ್ಲಿನಿಂದ ರಾಜ್ಯವಾಳುತ್ತಿದ್ದ ಕಾಕತೀಯ ವಂಶದ ಅರಸು. 

	ಇವರ ತಂದೆ ಎರಡನೆಯ ಪ್ರೋಲ. ಪ್ರೋಲನ ನಿಧನಾನಂತರ ಮಹಾದೇವನ ಅಣ್ಣ ರುದ್ರದೇವ ಪಟ್ಟಕ್ಕೆ ಬಂದ. ಅವನು ಸೇವುಣ ಜೈತುಗಿಯೊಡನೆ ಸುಮಾರು 1195ರಲ್ಲಿ ನಡೆದ ಕದನದಲ್ಲಿ ಮಡಿದ. ಮುಂದೆ ಅಣ್ಣನ ಮರಣದ ಸೇಡುತೀರಿಸಿಕೊಳ್ಳಲೆಂದು ಜೈತುಗಿಯೊಡನೆ ಮಹಾದೇವ ಯುದ್ಧಹೂಡಿದ. ಆದರೆ ಅದರಲ್ಲಿ ಇವನು ಮೃತನಾದ. ಇವರ ಮಗ ಗಣಪತಿ ಸೆರೆಸಿಕ್ಕ. ಜೆತುಗಿ ಗಣಪತಿಯನ್ನು ಅನಂತರ ಮುಕ್ತಿಗೊಳಿಸಿದನೆಂದು ಸೇವುಣ ಶಾಸನಗಳು ಹೇಳುತ್ತವೆ. ಮಹಾದೇವನ  ಆಡಳಿತದ ಕಾಲ ಬಲು ಚಿಕ್ಕದು (1195-98). ಇವನಿಗೆ ಗಣಪತಿಯಲ್ಲದೆ ಮೇಲಮಾಂಬಿಕಾ ಮತ್ತು ಕುಂದಾಂಬಿಕಾ ಎಂಬ ಇಬ್ಬರು  ಹೆಣ್ಣು ಮಕ್ಕಳಿದ್ದರು. 									  
 (ಎಸ್. ಆರ್.)